Wednesday 6 May 2009

ಸಾಕ್ಷೀಭಾವ; ಕತ್ತಲು-ಪ್ರಕಾಶ

ಸಂಸಾರ-ಮೋಕ್ಷ, ಮಿಥ್ಯ-ಸತ್ಯ ಈ ಪದದ್ವಯಗಳೇನು? ಕತ್ತಲು-ಪ್ರಕಾಶ ದ್ವಂದ್ವಗಳಂತೆ ಕಾಣುತ್ತವೆ. ಪರಸ್ಪರ ವಿರೋಧ ಶಬ್ದಗಳಂತೆ ಕಾಣುತ್ತವೆ. ಒಂದು ಮತ್ತೊಂದರ ಶತ್ರುವೇನೋ ಅನಿಸುತ್ತದೆ. ಪ್ರಕಾಶ ಬಂದಾಗ ಕತ್ತಲು ಹೋಯಿತು ಎನ್ನುತ್ತೇವೆ. ಬೆಳಕು ಬಂತು ಅಂಧಕಾರ ಹೋಯಿತು ಎಂಬ ಪರಿಭಾಷೆ ಬಳಕೆಯಲ್ಲಿ ಇದೆ. ಬೆಳಕು ಬಂದದ್ದಾದರೂ ಎಲ್ಲಿಂದ? ಕತ್ತಲು ಹೋದದ್ದೇ ಆದರೂ ಎಲ್ಲಿಗೆ? ವಾಸ್ತವದಲ್ಲಿ ಬೆಳಕು ಬಂದಾಗ ಕತ್ತಲು ಬೆಳಕಿನೊಂದಿಗೆ ಲೀನವಾಯಿತು. ಬೆಳಕು ಅಂಧಕಾರವನ್ನು ತನ್ನೊಳಗೆ ಸೇರಿಸಿಕೊಂಡಿದೆಯಷ್ಟೇ. ಬೆಳಕು ಮರೆಯಾದರೆ ಅಂಧಕಾರ ಇದ್ದಲ್ಲೇ ಉಳಿದಿರುವುದು.

ಮಿಥ್ಯ-ಸತ್ಯ ಇವೆರಡರ ಬಗೆಗೂ ಇದೇ ಪರಿಭಾಷೆ ಪರಿಕಲ್ಪನೆ ಸಾಧುವೆನಿಸುವಂಥಾದ್ದು. ಸಂಸಾರ-ಮೋಕ್ಷ ಎಂದಾಗಲೂ ಇದೇ ಅನ್ವಯಿಕವಾಗಿರುವುದು ಭಾಸವಾಗುವುದು. ಮೋಕ್ಷವಾದಾಗ ಸಂಸಾರ ಇಲ್ಲವಾಯಿತೇ ? ಸಂಸಾರವಿದ್ದಂತೆಯೇ ಮೋಕ್ಷವೂ ಸಾಧ್ಯ. ಮೋಕ್ಷವಾದಾಗ ಸಂಸಾರದ ಭಾಸವಾಗದಿರುವುದಷ್ಟೇ ಪರಿಕಲ್ಪನೆಯ ಪರಿಪಕ್ವತೆಯನ್ನು ಅರ್ಥೈಸಿಕೊಡುವುದು. ಈ ಹಿನ್ನೆಲೆಯಲ್ಲಿ ಜೀವನ್ಮುಕ್ತತೆಗೆ ಹೆಚ್ಚು ಸ್ಪುಟವಾದ ಅರ್ಥವ್ಯಾಪ್ತಿಯಾಗುವುದು ಶರೀರ ಮನಸ್ಸು ಆತ್ಮಗಳ ವಿಭಾಗೀಕರಣದಲ್ಲಿ ಆತ್ಮವು ಸ್ಥಾಯಿಯಾಗಿ ಅವಿನಾಶಿಯಾಗಿ ಇರುತ್ತದೆ. ಮನಸ್ಸು ಶರೀರಾದಿ ವಿಷಯಗಳು ಸಂಚಾರಿ ಭಾವದಲ್ಲಿ ನಾಶಗಾಮಿಯಾಗಿ ಇರುತ್ತವೆ. ಇವುಗಳನ್ನೇ ಆತ್ಯಂತಿಕವಾಗಿ ಅಸ್ತಿತ್ವದಲ್ಲಿ ಕಂಡುಕೊಳ್ಳುತ್ತಾ ಇವುಗಳನ್ನೆಲ್ಲಾ ಆತ್ಮದಂತಹ ದರ್ಪಣದಲ್ಲಿ ಲೇಪಿಸಿಕೊಂಡು ಆತ್ಮಭಾವವನ್ನೇ ಕಳೆದುಕೊಳ್ಳುವುದು ಅಂಧಕಾರಕ್ಕೆ ಕಾರಣವಾಗುವುದು. ಅಜ್ಞಾನಕ್ಕೆ ಪರಮೋಚ್ಛ ಸ್ಥಾನವನ್ನು ಕಲ್ಪಿಸಿಕೊಳ್ಳುವುದು ನಾಶಕಾರಿ ಎನಿಸುವುದು. ನಾಶವಿಲ್ಲದ ಸಾಕ್ಷೀಭಾವವನ್ನು ಉಳಿಸಿಕೊಳ್ಳುವುದೆಂದರೆ ಮನಸ್ಸು ಶರೀರಾದಿಗಳು ಇದ್ದಂತೆಯೇ ಆತ್ಮದ ದರ್ಪಣದಲ್ಲಿ ಅವುಗಳನ್ನು ಅಂಟಿಸಿಕೊಳ್ಳದೆ ದರ್ಪಣದ ಪ್ರತಿಪಲನ ಗುಣವನ್ನು ಶುದ್ಧ ಹಾಗೂ ಸ್ಪುಟವಾಗಿ ಇರಿಸಿಕೊಳ್ಳುವುದೇ ಸಾಕ್ಷೀಭಾವ. ನಾಶಗುಣದ ವಸ್ತುವಿನ ಆಘಾತವು ಅವಿನಾಶಿ ವಸ್ತುವಿನ ಮೇಲೆ ಆಗದಂತೆ ಇರುವ ಸಾತಥ್ಯ ಗುಣದ ಆಕಾಶಿ ಭಾವವೇ ಸಾಕ್ಷೀಭಾವ.

No comments:

Post a Comment