Friday 1 May 2009

ಕೈವಲ್ಯ

ಚೇತನ ಮಾತ್ರವನ್ನೇ ಅನುಭವಿಸುವ ಒಂದು ಕೇವಲ ಸ್ಥಿತಿಯೇ ಕೈವಲ್ಯ. ಚೇತನ ಬಿಟ್ಟು ಯಾವ ವಿಚಾರವೂ ಇಲ್ಲದ ಅನುಭವವೇ ಕೈವಲ್ಯ. ಇದು ಚೈತನ್ಯ ಮಾತ್ರದ ಕಥಾನುಭವ. ಎಚ್ಚರ ಮಾತ್ರದ ಕಥಾನುಭವ. ಇದೊಂದು ಸಾಕ್ಷೀ ಸ್ಥಿತಿ ಅಥವಾ ಭಾವ. ಇಲ್ಲೊಂದು ಏಕೀಭಾವ ಅಥವಾ ಏಕಾಂಗಿ ಸ್ಥಿತಿ ಇರುವುದು. ಎಲ್ಲವನ್ನು ಕಾಣುವಂತೆ ಇದ್ದರೂ ಕಂಡದ್ದೆಲ್ಲಾ ಕನಸಷ್ಟೇ. ಕನಸಿನಂತಷ್ಟೇ. ಇಲ್ಲಿ ನಾನೆ ಇರುವುದು. ಮತ್ತೆ ಇನ್ನೇನೂ ಇಲ್ಲ. ಅಗಾಧ ಚೈತನ್ಯ ಸಾಗರದಲ್ಲಿ ಅರಗಿ ಲೀನವಾಗಿರುವ ಸ್ಥಿತಿ ಏನೇನೂ ಇಲ್ಲ. ಎಚ್ಚರದ ಸ್ಥಿತಿ.
ಜಗತ್ತಿನ ಎಲ್ಲ ವ್ಯಾಪಾರಗಳೂ ಇರುವುದು ಆಟಮಾತ್ರ. ಸಾಕ್ಷೀ ಒಂದು ಚೇತನ ಮಾತ್ರವೇ ಕೇವಲ ಸತ್ಯ. ದೃಷ್ಟ ಮಾತ್ರನೇ ಸತ್ಯ. ಇದೊಂದು ಜಾಗೃತ ಸ್ಥಿತಿ. ರಾತ್ರಿ ಗಾಢ ನಿದ್ರೆ. ಅನಂತದ ಜತೆ ಲೀನವಾಗುವ ಸ್ಥಿತಿ. ಚೇತನಗಳೆಲ್ಲಾ ಜಾಗೃತವಾದ ಸ್ಥಿತಿ. ಯಾರೋ ಕಳ್ಳ ಕಿಟಕಿ ಮುರಿಯುವ ಸಿದ್ಧತೆಯಲ್ಲಿ ಇದ್ದಾನೆ. ಈ ಜಾಗೃತ ಸ್ಥಿತಿ ಇದನ್ನು ನೋಡುತ್ತದೆ. ನಿದ್ರೆಯಿಂದ ಎಚ್ಚರವಾಗುತ್ತದೆ. ಎದ್ದು ದೀಪ ಬೆಳಗಿಸುತ್ತಲೇ ಕಳ್ಳ ಓಟಕಿತ್ತಿರುತ್ತಾನೆ. ಹೊರಗೆ ನಿದ್ರೆಯಿಂದ ಎಚ್ಚರವಾದಾಗಲೂ ನಮಗೆ ಈ ಸುದ್ದಿ ಮಾತ್ರ ಇಲ್ಲ. ಆದರೆ ನಮ್ಮ ಈ ಚೈತನ್ಯದ ಸ್ಥಿತಿ ಇದನ್ನು ಕೇವಲವಾಗಿ ಕಂಡಿದೆ. ತತ್ಸಂಬಂಧಿ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ. ಈ ಆಂತರಿಕ ಎಚ್ಚರದ ಸ್ಥಿತಿಯನ್ನೇ ಸಾಕ್ಷೀಭಾವ ಎನ್ನುವುದು. ರಾತ್ರಿ ಮೂರು ಗಂಟೆಗೆ ಎದ್ದು ನಾಲ್ಕು ಗಂಟೆಯ ರೈಲನ್ನು ಹಿಡಿಯಲಿಕ್ಕಿದೆ. ಗಡಿಯಾರದ ಮುಳ್ಳು ಮೂರರಲ್ಲಿ ನಿಂತದ್ದೇ ಸರಿ, ತಕ್ಷಣ ಗಾಢ ನಿದ್ರೆಯಿಂದ ಎಚ್ಚರವಾಗುವುದು. ಇದು ನಮ್ಮೊಳಗಿರುವ ಸಾಕ್ಷೀಭಾವದ ಸೂಚನೆ. ಈ ಸಂಜ್ಞೆಯೇ ಎಚ್ಚರ. ಕೆಲವರಲ್ಲಿ ಇದು ಮಸುಕು ಮಸುಕಾಗಿರಬಹುದು. ಅಥವಾ ಅನುಭವಕ್ಕೆ ಬಾರದಿರಬಹುದು. ಇನ್ನು ಕೆಲವರಿಗೆ ಈ ಅನುಭವ ಅತ್ಯಂತ ತೀವ್ರತರವಾಗಿರಬಹುದು. ಸದಾ ಜಾಗೃತವಾಗಿರಬಹುದು. ಇದೇ ನಿಜವಾದ ಜಾಗೃತ ಅವಸ್ಥೆ. ಇದನ್ನೇ ಎಚ್ಚರ, ಜಾಗೃತಿ ಎನ್ನುವರು. ಇಂತಹ ಎಚ್ಚರದಲ್ಲಿಯೇ ಕಾಯುವಂತಿರಬೇಕು. ಈ ರೀತಿ ಎಚ್ಚರದಲ್ಲಿ ಜೀವಿಸುವವರು ಒಂದು ದಿನ ಎಚ್ಚರದಲ್ಲಿಯೇ ಸಾಯುವವರು ಕೂಡ. ಇಂತಹ ಎಚ್ಚರದಿಂದ ಸಾಯುವವರಿಗೆ ಬ್ರಹ್ಮರೂಪನದನೆಂಬ ಅನುಭವವಾಗುವುದು. ಇದು ಸಾಕ್ಷೀಭಾವ. ಶರೀರದಲ್ಲಿರುವ ಸುಪ್ತವಾಗಿರುವ ಚೇತನದೊಂದಿಗೆ ಇದರ ಅನುಭವವನ್ನು ಹೊಂದಬಹುದಾಗಿದೆ. ತದನಂತರ ಶರೀರಯಾಮದಿಂದ ಹೊರತಾಗಿಯೂ ಅನುಭವವನ್ನು ಪಡೆಯಬಹುದಾಗಿದೆ. ಇಂತಾದ ಎಚ್ಚರದ ಸ್ಥಿತಿಯಲ್ಲಿ ಶರೀರದ ಘಟ ಒಡೆದುಕೊಳ್ಳುವ ಘಟನೆಯಲ್ಲೂ ಸಾಕ್ಷೀಭಾವವು ಘಟ ಒಡೆಯುವ ಮೃತ್ಯುವೆಂಬ ಪ್ರಕ್ರಿಯೆಯನ್ನೂ ಅನುಭವಿಸಬಹುದು. ಈ ಎಚ್ಚರವೇ ಅಂತರಾಕಾಶದಲ್ಲಿ ವಿರಾಟಾಕಾಶದಲ್ಲಿ ಲೀನವಾಗುತ್ತದೆ. ಎಚ್ಚರದ ಕೇವಲ ಚೇತನವಾಗಿಯೋ ಆತ್ಮವಾಗಿಯೋ ಉಳಿಯುತ್ತದೆ. ಇಲ್ಲಿಂದ ಮತ್ತೊಂದು ಅದ್ಭುತ ಅಂತರ್ಯಾತ್ರೆ ಮುಂದುವರಿಯುವುದು. ಇಂತಹವರಿಗೆಂತು ಮೃತ್ಯು ಶತ್ರುವಾಗಲು ಸಾಧ್ಯ?
ಈ ಎಚ್ಚರವಂತ ಚೇತನರಿಗೆ ಮೃತ್ಯುವು ಮಿತ್ರನೇ. ಆತ್ಮ ಪರಮಾತ್ಮರ ಮಿಲನವು ಜೀವಂತ. ಜೀವನ ನಡೆಸುತ್ತಿರುವಾಗಲೂ ಎಚ್ಚರದ ಸ್ಥಿತಿಯಲ್ಲಿ ಸುಪ್ತವಾಗಿ ಗುಪ್ತವಾಗಿ ನಡೆಯುತ್ತಿರುತ್ತದೆ. ಇಂತಹ ಮಿಲನದ ಮಂದಿರದೊಳಗೆ ಮಹಾದ್ವಾರದಂತಿದೆ. ಧ್ಯಾನ ಪ್ರಕ್ರಿಯೆ ಇಂತಹ ಗಾಢತಮವಾದಂತೆ ಸಾಕ್ಷೀಭಾವವು ತೀವ್ರತರವಾಗುತ್ತಿರುತ್ತದೆ.

No comments:

Post a Comment