Tuesday 26 May 2009

ಸಾಕ್ಷಿಯಪಥದಲ್ಲಿ....

ಸಾಕ್ಷಿಯಾಗಿರುವುದು, ಸಾಕ್ಷಿಯನ್ನು ಕಂಡುಕೊಳ್ಳುವುದು ಅಧ್ಯಾತ್ಮವೇ ಹೊರತು ದೇವರನ್ನು ಅನ್ವೇಷಿಸುವುದು ಅಧ್ಯಾತ್ಮವಲ್ಲ.
ಪ್ರಾಚೀನರು ಈಶ್ವರಾನ್ವೇಷಣೆಗೆ ಹೊರಟದ್ದಿಲ್ಲ. ಸಾಕ್ಷಿಯಾಗಿರುವುದನ್ನು ಕಂಡುಕೊಳ್ಳಲು ಯತ್ನಿಸಿದ್ದಾರೆ. ಯೋಗನಾದರೂ ಅಷ್ಟೇ. ಆಗ ಮಾತ್ರವೇ ಯೋಗವಾದವು ಅಧ್ಯಾತ್ಮ ಎನಿಸೀತು. ಈಶ್ವರನನ್ನಾದರೂ ನಿರಾಕರಿಸಲಾದೀತು. ನಿರೀಶ್ವರರು ನಿರಾಕರಿಸಿದ್ದಾರೆ. ಆದರೆ ಸಾಕ್ಷಿಯನ್ನಾರಿಗೂ ನಿರಾಕರಿಸಲಾಗಲಿಲ್ಲ. ಬುದ್ಧನಿಗೂ ಆಗಿಲ್ಲ. ಮಹಾವೀರನಿಗೂ ಆಗಿಲ್ಲ. ಚಾರುವಾಕನಿಗೂ ಆಗಿಲ್ಲ. ಸಾಕ್ಷಿಯನ್ನು ಎಂತು ನಿರಾಕರಿಸುವುದು.

Wednesday 13 May 2009

Towards Comment by Saadhana

ಭಾರತೀಯ ಪರಂಪರೆಯಲ್ಲಿ ವಿದ್ಯೆಗಳದ್ದೇ ದೊಡ್ಡ ಕೋಶವಿದೆ. ಒಂದೊಂದು ವಿದ್ಯೆಯೂ ಗಹನವಾದ ನಿಘಂಟಿನಂತಿದೆ. ಪರಂಪರೆಯಲ್ಲಿ ಬರುವ ವಿದ್ಯೆಗಳೆಲ್ಲಾ ಅಕ್ಷರ ಜೋಡನೆಗಳಿಂದ ಮಂತ್ರವತ್ ರೂಪದಲ್ಲೇ ಇರುತ್ತವೆ. ಕವನದಲ್ಲಿ ಬಂದ ಮಧುವಿದ್ಯೆ ಅಂತವುಗಳಲ್ಲಿ ಒಂದು. ಇಲ್ಲಿ ಆತ್ಮಭಾವವನ್ನು ಜಾಗೃತಗೊಳಿಸುವ ಸಾಧನವಿದೆ. ದೃಷ್ಟಾರರು ಜೀವಿಗಗೊಳಗೆ ಹೃದಯ ಹೃದಯಗಳ ನಡುವಿನ ಸ್ನೇಹಭಾವವನ್ನು ದರ್ಶಿಸಿಕೊಂಡು ಸಾಕ್ಷೀಭಾವವನ್ನು ಸಾಧಕಗೊಲಿಸುವ ಸಿದ್ಧಿಯತ್ತ ಸಾಧಕನನ್ನು ಒಯ್ಯುವ ಯತ್ನವನ್ನು ಮಾಡುತ್ತಾರೆ. ಮಧು ಸ್ನೇಹದ ಸಂಕೇತ. ಇಲ್ಲಿ ಸ್ನೇಹ ಏಕೀಭಾವದಲ್ಲಿ ಆತ್ಮಭಾವದಲ್ಲಿ ಹೃದಯಕ್ಕೆ ಸ್ಥಾನವನ್ನು ಈಯುತ್ತದೆ. ತಲೆಗೆ ಬುದ್ಧಿಗೆ ಸ್ಥಾನ ಅಮುಖ್ಯವೆನಿಸುತ್ತದೆ. ಇದು ಭಾರತೀಯ ವಿದ್ಯೆಯ ಒಂದು ಸೊಗಸು.

ಈ ಮಧುವಿದ್ಯೆ

ಎಲ್ಲೆಲ್ಲೂ ಎಲ್ಲರೂ ಇದ್ದಾರೆ
ಇನ್ನೆಲ್ಲೆಲ್ಲೋ
ಯಾರೊಬ್ಬರೂ ಯಾರೊಂದಿಗೂ
ಮಿಲನ ಆಗುತ್ತಿಲ್ಲ
ಯಾರು ಯಾರ ಮನೆಗೆ ಹೋದರೂ
ಅಲ್ಲಾರೂ ಇರುವುದಿಲ್ಲ
ಯಾರು ಯಾರೊಬ್ಬರ ಕೈಯನ್ನೇ ಹಿಡಿದರೂ
ಅವರಿವರಾರೂ ಅಲ್ಲಿ ಇರುವುದಿಲ್ಲ
ಯಾರೋ ಯಾರದೋ ಹೃದಯಸ್ಪರ್ಶಿಸಿದರೂ ಯಾರೂ
ಯಾರದೋ ತಲೆಯ ಮೇಲೆಯೇ ಕೈ ಇಟ್ಟಂತಾಗುವುದು
ಹೃದಯದಲ್ಲಾರನ್ನೂ ಕಾಣಲಾಗದೆ
ಎಲ್ಲರೂ ಎಲ್ಲರಿಗೂ ತಲೆಯಲ್ಲೇ ಎದುರಾಗುವರು
ಆಗ ಎಲ್ಲರೂ ಇನ್ನೇನನ್ನೋ ಇನ್ನೆಲ್ಲೆಲ್ಲೋ
ಅರಸರಸುತ್ತಾ ಹೋಗುತ್ತಲೇ ಇರುತ್ತಾರೆ
ಯಾರೊಬ್ಬರಿಗೂ ಮಿಲನದ ಸುಖವಿಲ್ಲ
ಅಯ್ಯೋ ಮಿಲನವಾಗಲು ಆಗುತ್ತಿಲ್ಲೆನೇನೋ ಕಾರಣಗಳಿಗಾಗಿ ಹುಡುಕುತ್ತಾರೆ
ನೋಡುತ್ತಾರೆ ದುಃಖದ ಮಡುವುಗಳನ್ನೇ
ಸುಖದ ಆಸೆಗಳು ಬಂಧಿಸುತ್ತಲೇ ಇರುತ್ತವೆ
ಆಸೆಗಳೆಲ್ಲಾ ಮುರಿದು ಬೀಳುತ್ತಲೇ ಇರುತ್ತವೆ

ಪರರಿಂದೇನು ಸಿಕ್ಕೀತು ದುಃಖವೊಂದನ್ನು ಬಿಟ್ಟು
ಸಿಗಲಾರದು ಸುಖವೂ
ಆಗಬೇಕಾದವರು ನೀವು ಪರರಲ್ಲ
ಪರರು ಆಗಬೇಕಾದಲ್ಲಿ ನೀವಲ್ಲ ಆಗಬೇಕಾದವರು
ನೀವಾಗಿ ನೀವಾಗಿ ನೀವಾಗಿ
ನೀವಾಗಿ ಪರರು
ಇದೇ ಈ ಮಧುವಿದ್ಯೆ ಮಣ್ಣಿನ ವಿದ್ಯೆ.....

Sunday 10 May 2009

ಪರಮಾತ್ಮ

ನಮ್ಮನ್ನು ನಾವು ಕರೆಯಬೇಕೇ? ಕೂಗಬೇಕೇ? ಇನ್ನೊಬ್ಬನನ್ನು ಬೇಕಾದರೆ ಕೂಗಿ ಕರೆಯಬೇಕು.

ನಾವು ಏನನ್ನು ಹುಡುಕುತ್ತಿದ್ದೆವೋ ಅದರಲ್ಲೇ ನಾವು ಇದ್ದೇವೆ. ನಮಗೆಕೋ ಗೊತ್ತಾಗುತ್ತಿಲ್ಲ.

ನಮ್ಮ ಆಂತರ್ಯದೊಳಗೆ ಮೌನ ಉಂಟಾದರೂ ಸಾಕು. ಅದು ಸಹ ಕೇಳಿಸುವಷ್ಟು ಸನಿಹದಲ್ಲಿಯೇ ಇದ್ದಾನೆ ಪರಮಾತ್ಮ.

ಯಾವುದು ಸನಿಹದಲ್ಲಿರುವುದೋ ಅದೇ ಕಳೆದು ಹೋಗುವುದು. ಮೀನಿಗೆಂತು ಸಾಗರವನ್ನು ತಿಳಿದುಕೊಳ್ಳಲಾಗುವುದು?

ಸಾಗರಕ್ಕೆ ತೀರವಿದೆ, ನದಿಗೆ ತೀರವಿದೆ, ವಸ್ತು ವಿಷಯಗಳಿಗೆ ತೀರವಿದೆ. ಪರಮಾತ್ಮನಿಗೆ ಅಂತದ್ದೇನು ಬೇರೇನಾದರೂ ಇದೆಯೇ? ಇದೆ ಅಲ್ಲವೇ ಪರಮಾತ್ಮನ ಅರ್ಥ.

ಇದೇ ಪರಮಾತ್ಮನ ವೈಜ್ಞಾನಿಕ ಪರಿಭಾಷೆಯೇನು?

ಎನಿರುವುದೋ ಅದಕ್ಕೆ ತೀರವಿಲ್ಲ. ಏನಿಲ್ಲವೋ ಅವೆಲ್ಲಕ್ಕೂ ತೀರವಿದೆ.

ಸತ್ಯದಿಂದ ದೂರವಾಗುವುದಾದರೂ ಏಕೆಂದರೆ ಸತ್ಯದಿಂದಲೇ ನಾವು ಹುಟ್ಟಿರುವುದರಿಂದ.

ಕಳೆಯಲಾಗದ, ಕಳೆದುಹೋಗದ, ಕಳೆದುಕೊಳ್ಳಲಾಗದ, ಕಳೆದುಹೋದಂತನಿಸುವ, ಕಳೆದೇಹೋದರೂ ಕಳೆದುಹೋಗದಂತಿರುವ, ಕಳೆದುಕೊಳ್ಳಲೆತ್ನಿಸಿದರೂ ಕಳೆದುಹೋಗದ, ಕಳೆದುಹೋದಂತೆ ಕಂಡರೂ ಕಳೆದೂ ಉಳಿದೇ ಬಿಡುವ, ಕಳೆಯಲಾಗದ, ಕಳೆದುಕೊಂಡಿರುವ ಬದುಕಿನ ಕಳೆಯಲ್ಲಿ ಕಳೆದು ಕಳೆದಷ್ಟೂ ಕಳೆದುಹೋಗದ ಎಲ್ಲವೂ ಕೊಳೆಯಾದರೂ ಕೊನೆಗೂ ಕಳೆಯಾಗಿ ಉಳಿಯದ, ಆದರೂ ಕಳೆದೇಕೊಂಡವರಂತೆ ಸದಾ ಹುಡುಕಾಡುವ, ಎಳೆ ಎಳೆಯಾಗಿಯೂ ಕಳೆಯದ, ಕಳೆಯಲಾಗದ ಆ ವಸ್ತು ಪರಮಾತ್ಮ.

Wednesday 6 May 2009

ಸಾಕ್ಷೀಭಾವ; ಕತ್ತಲು-ಪ್ರಕಾಶ

ಸಂಸಾರ-ಮೋಕ್ಷ, ಮಿಥ್ಯ-ಸತ್ಯ ಈ ಪದದ್ವಯಗಳೇನು? ಕತ್ತಲು-ಪ್ರಕಾಶ ದ್ವಂದ್ವಗಳಂತೆ ಕಾಣುತ್ತವೆ. ಪರಸ್ಪರ ವಿರೋಧ ಶಬ್ದಗಳಂತೆ ಕಾಣುತ್ತವೆ. ಒಂದು ಮತ್ತೊಂದರ ಶತ್ರುವೇನೋ ಅನಿಸುತ್ತದೆ. ಪ್ರಕಾಶ ಬಂದಾಗ ಕತ್ತಲು ಹೋಯಿತು ಎನ್ನುತ್ತೇವೆ. ಬೆಳಕು ಬಂತು ಅಂಧಕಾರ ಹೋಯಿತು ಎಂಬ ಪರಿಭಾಷೆ ಬಳಕೆಯಲ್ಲಿ ಇದೆ. ಬೆಳಕು ಬಂದದ್ದಾದರೂ ಎಲ್ಲಿಂದ? ಕತ್ತಲು ಹೋದದ್ದೇ ಆದರೂ ಎಲ್ಲಿಗೆ? ವಾಸ್ತವದಲ್ಲಿ ಬೆಳಕು ಬಂದಾಗ ಕತ್ತಲು ಬೆಳಕಿನೊಂದಿಗೆ ಲೀನವಾಯಿತು. ಬೆಳಕು ಅಂಧಕಾರವನ್ನು ತನ್ನೊಳಗೆ ಸೇರಿಸಿಕೊಂಡಿದೆಯಷ್ಟೇ. ಬೆಳಕು ಮರೆಯಾದರೆ ಅಂಧಕಾರ ಇದ್ದಲ್ಲೇ ಉಳಿದಿರುವುದು.

ಮಿಥ್ಯ-ಸತ್ಯ ಇವೆರಡರ ಬಗೆಗೂ ಇದೇ ಪರಿಭಾಷೆ ಪರಿಕಲ್ಪನೆ ಸಾಧುವೆನಿಸುವಂಥಾದ್ದು. ಸಂಸಾರ-ಮೋಕ್ಷ ಎಂದಾಗಲೂ ಇದೇ ಅನ್ವಯಿಕವಾಗಿರುವುದು ಭಾಸವಾಗುವುದು. ಮೋಕ್ಷವಾದಾಗ ಸಂಸಾರ ಇಲ್ಲವಾಯಿತೇ ? ಸಂಸಾರವಿದ್ದಂತೆಯೇ ಮೋಕ್ಷವೂ ಸಾಧ್ಯ. ಮೋಕ್ಷವಾದಾಗ ಸಂಸಾರದ ಭಾಸವಾಗದಿರುವುದಷ್ಟೇ ಪರಿಕಲ್ಪನೆಯ ಪರಿಪಕ್ವತೆಯನ್ನು ಅರ್ಥೈಸಿಕೊಡುವುದು. ಈ ಹಿನ್ನೆಲೆಯಲ್ಲಿ ಜೀವನ್ಮುಕ್ತತೆಗೆ ಹೆಚ್ಚು ಸ್ಪುಟವಾದ ಅರ್ಥವ್ಯಾಪ್ತಿಯಾಗುವುದು ಶರೀರ ಮನಸ್ಸು ಆತ್ಮಗಳ ವಿಭಾಗೀಕರಣದಲ್ಲಿ ಆತ್ಮವು ಸ್ಥಾಯಿಯಾಗಿ ಅವಿನಾಶಿಯಾಗಿ ಇರುತ್ತದೆ. ಮನಸ್ಸು ಶರೀರಾದಿ ವಿಷಯಗಳು ಸಂಚಾರಿ ಭಾವದಲ್ಲಿ ನಾಶಗಾಮಿಯಾಗಿ ಇರುತ್ತವೆ. ಇವುಗಳನ್ನೇ ಆತ್ಯಂತಿಕವಾಗಿ ಅಸ್ತಿತ್ವದಲ್ಲಿ ಕಂಡುಕೊಳ್ಳುತ್ತಾ ಇವುಗಳನ್ನೆಲ್ಲಾ ಆತ್ಮದಂತಹ ದರ್ಪಣದಲ್ಲಿ ಲೇಪಿಸಿಕೊಂಡು ಆತ್ಮಭಾವವನ್ನೇ ಕಳೆದುಕೊಳ್ಳುವುದು ಅಂಧಕಾರಕ್ಕೆ ಕಾರಣವಾಗುವುದು. ಅಜ್ಞಾನಕ್ಕೆ ಪರಮೋಚ್ಛ ಸ್ಥಾನವನ್ನು ಕಲ್ಪಿಸಿಕೊಳ್ಳುವುದು ನಾಶಕಾರಿ ಎನಿಸುವುದು. ನಾಶವಿಲ್ಲದ ಸಾಕ್ಷೀಭಾವವನ್ನು ಉಳಿಸಿಕೊಳ್ಳುವುದೆಂದರೆ ಮನಸ್ಸು ಶರೀರಾದಿಗಳು ಇದ್ದಂತೆಯೇ ಆತ್ಮದ ದರ್ಪಣದಲ್ಲಿ ಅವುಗಳನ್ನು ಅಂಟಿಸಿಕೊಳ್ಳದೆ ದರ್ಪಣದ ಪ್ರತಿಪಲನ ಗುಣವನ್ನು ಶುದ್ಧ ಹಾಗೂ ಸ್ಪುಟವಾಗಿ ಇರಿಸಿಕೊಳ್ಳುವುದೇ ಸಾಕ್ಷೀಭಾವ. ನಾಶಗುಣದ ವಸ್ತುವಿನ ಆಘಾತವು ಅವಿನಾಶಿ ವಸ್ತುವಿನ ಮೇಲೆ ಆಗದಂತೆ ಇರುವ ಸಾತಥ್ಯ ಗುಣದ ಆಕಾಶಿ ಭಾವವೇ ಸಾಕ್ಷೀಭಾವ.

ಮನಸ್ಸು ಮತ್ತು ಸಾಂಖ್ಯ

ಮನಸ್ಸನ್ನು ಶರೀರದಿಂದ ಪ್ರತ್ಯೇಕಿಸಿದರೆ ಆಗ ಅದು ಯೋಗ. ಮನಸ್ಸನ್ನು ಆತ್ಮದಿಂದ ಪ್ರತ್ಯೇಕಿಸಿದರೆ ಆಗ ಅದು ಸಾಂಖ್ಯ.

ಆತ್ಮ ಮತ್ತು ಮನಸ್ಸು

ಆತ್ಮವು ಆಂತರ್ಯದ ಒಳಗಿನೊಂದು ದರ್ಪಣದಂತೆ. ಇದು ಸ್ವಚ್ಚ ಶುದ್ಧವಾಗಿದ್ದಲ್ಲಿ ಮನಸ್ಸಿನ ಯಾವ ಚಿತ್ರಗಳ ಪ್ರತಿಬಿಂಬಗಳು ದರ್ಪಣದಲ್ಲಿ ಮೂಡಿದರೂ ದರ್ಪಣಕ್ಕೆ ಅಂಟಿಕೊಳ್ಳಲಾಗದು . ಅಂಟಿಕೊಳ್ಳದೆ ಇದ್ದಾಗ ಒಳಗೆ ಯಾವ ಗಂಟೂ ಸಿಕ್ಕೂ ಇರಲಾರದು.
ಮನಸ್ಸಿನ ವಾಸನೆಗಳೊಂದಿಗೆ ಆತ್ಮವೋ ಬ್ರಹ್ಮವೋ ಬಂಧಿಯಾಗಿದ್ದಾಗ ಮಾತ್ರವೇ ಸಂಸಾರ. ಮನಸ್ಸಿನ ವಾಸನೆಗಳಿಂದ ಮುಕ್ತರಾದಾಗ ಸಂಸಾರದಿಂದ ಮುಕ್ತರು. ಸಂಸಾರದಲ್ಲಿಯೇ ನಾವಿದ್ದರೂ ಜೀವನ್ಮುಕ್ತರಂತೆ ಇರಬಹುದು.

Friday 1 May 2009

ಕೈವಲ್ಯ

ಚೇತನ ಮಾತ್ರವನ್ನೇ ಅನುಭವಿಸುವ ಒಂದು ಕೇವಲ ಸ್ಥಿತಿಯೇ ಕೈವಲ್ಯ. ಚೇತನ ಬಿಟ್ಟು ಯಾವ ವಿಚಾರವೂ ಇಲ್ಲದ ಅನುಭವವೇ ಕೈವಲ್ಯ. ಇದು ಚೈತನ್ಯ ಮಾತ್ರದ ಕಥಾನುಭವ. ಎಚ್ಚರ ಮಾತ್ರದ ಕಥಾನುಭವ. ಇದೊಂದು ಸಾಕ್ಷೀ ಸ್ಥಿತಿ ಅಥವಾ ಭಾವ. ಇಲ್ಲೊಂದು ಏಕೀಭಾವ ಅಥವಾ ಏಕಾಂಗಿ ಸ್ಥಿತಿ ಇರುವುದು. ಎಲ್ಲವನ್ನು ಕಾಣುವಂತೆ ಇದ್ದರೂ ಕಂಡದ್ದೆಲ್ಲಾ ಕನಸಷ್ಟೇ. ಕನಸಿನಂತಷ್ಟೇ. ಇಲ್ಲಿ ನಾನೆ ಇರುವುದು. ಮತ್ತೆ ಇನ್ನೇನೂ ಇಲ್ಲ. ಅಗಾಧ ಚೈತನ್ಯ ಸಾಗರದಲ್ಲಿ ಅರಗಿ ಲೀನವಾಗಿರುವ ಸ್ಥಿತಿ ಏನೇನೂ ಇಲ್ಲ. ಎಚ್ಚರದ ಸ್ಥಿತಿ.
ಜಗತ್ತಿನ ಎಲ್ಲ ವ್ಯಾಪಾರಗಳೂ ಇರುವುದು ಆಟಮಾತ್ರ. ಸಾಕ್ಷೀ ಒಂದು ಚೇತನ ಮಾತ್ರವೇ ಕೇವಲ ಸತ್ಯ. ದೃಷ್ಟ ಮಾತ್ರನೇ ಸತ್ಯ. ಇದೊಂದು ಜಾಗೃತ ಸ್ಥಿತಿ. ರಾತ್ರಿ ಗಾಢ ನಿದ್ರೆ. ಅನಂತದ ಜತೆ ಲೀನವಾಗುವ ಸ್ಥಿತಿ. ಚೇತನಗಳೆಲ್ಲಾ ಜಾಗೃತವಾದ ಸ್ಥಿತಿ. ಯಾರೋ ಕಳ್ಳ ಕಿಟಕಿ ಮುರಿಯುವ ಸಿದ್ಧತೆಯಲ್ಲಿ ಇದ್ದಾನೆ. ಈ ಜಾಗೃತ ಸ್ಥಿತಿ ಇದನ್ನು ನೋಡುತ್ತದೆ. ನಿದ್ರೆಯಿಂದ ಎಚ್ಚರವಾಗುತ್ತದೆ. ಎದ್ದು ದೀಪ ಬೆಳಗಿಸುತ್ತಲೇ ಕಳ್ಳ ಓಟಕಿತ್ತಿರುತ್ತಾನೆ. ಹೊರಗೆ ನಿದ್ರೆಯಿಂದ ಎಚ್ಚರವಾದಾಗಲೂ ನಮಗೆ ಈ ಸುದ್ದಿ ಮಾತ್ರ ಇಲ್ಲ. ಆದರೆ ನಮ್ಮ ಈ ಚೈತನ್ಯದ ಸ್ಥಿತಿ ಇದನ್ನು ಕೇವಲವಾಗಿ ಕಂಡಿದೆ. ತತ್ಸಂಬಂಧಿ ಕ್ರಿಯೆಗಳಲ್ಲಿ ತೊಡಗಿಸಿಕೊಂಡಿದೆ. ಈ ಆಂತರಿಕ ಎಚ್ಚರದ ಸ್ಥಿತಿಯನ್ನೇ ಸಾಕ್ಷೀಭಾವ ಎನ್ನುವುದು. ರಾತ್ರಿ ಮೂರು ಗಂಟೆಗೆ ಎದ್ದು ನಾಲ್ಕು ಗಂಟೆಯ ರೈಲನ್ನು ಹಿಡಿಯಲಿಕ್ಕಿದೆ. ಗಡಿಯಾರದ ಮುಳ್ಳು ಮೂರರಲ್ಲಿ ನಿಂತದ್ದೇ ಸರಿ, ತಕ್ಷಣ ಗಾಢ ನಿದ್ರೆಯಿಂದ ಎಚ್ಚರವಾಗುವುದು. ಇದು ನಮ್ಮೊಳಗಿರುವ ಸಾಕ್ಷೀಭಾವದ ಸೂಚನೆ. ಈ ಸಂಜ್ಞೆಯೇ ಎಚ್ಚರ. ಕೆಲವರಲ್ಲಿ ಇದು ಮಸುಕು ಮಸುಕಾಗಿರಬಹುದು. ಅಥವಾ ಅನುಭವಕ್ಕೆ ಬಾರದಿರಬಹುದು. ಇನ್ನು ಕೆಲವರಿಗೆ ಈ ಅನುಭವ ಅತ್ಯಂತ ತೀವ್ರತರವಾಗಿರಬಹುದು. ಸದಾ ಜಾಗೃತವಾಗಿರಬಹುದು. ಇದೇ ನಿಜವಾದ ಜಾಗೃತ ಅವಸ್ಥೆ. ಇದನ್ನೇ ಎಚ್ಚರ, ಜಾಗೃತಿ ಎನ್ನುವರು. ಇಂತಹ ಎಚ್ಚರದಲ್ಲಿಯೇ ಕಾಯುವಂತಿರಬೇಕು. ಈ ರೀತಿ ಎಚ್ಚರದಲ್ಲಿ ಜೀವಿಸುವವರು ಒಂದು ದಿನ ಎಚ್ಚರದಲ್ಲಿಯೇ ಸಾಯುವವರು ಕೂಡ. ಇಂತಹ ಎಚ್ಚರದಿಂದ ಸಾಯುವವರಿಗೆ ಬ್ರಹ್ಮರೂಪನದನೆಂಬ ಅನುಭವವಾಗುವುದು. ಇದು ಸಾಕ್ಷೀಭಾವ. ಶರೀರದಲ್ಲಿರುವ ಸುಪ್ತವಾಗಿರುವ ಚೇತನದೊಂದಿಗೆ ಇದರ ಅನುಭವವನ್ನು ಹೊಂದಬಹುದಾಗಿದೆ. ತದನಂತರ ಶರೀರಯಾಮದಿಂದ ಹೊರತಾಗಿಯೂ ಅನುಭವವನ್ನು ಪಡೆಯಬಹುದಾಗಿದೆ. ಇಂತಾದ ಎಚ್ಚರದ ಸ್ಥಿತಿಯಲ್ಲಿ ಶರೀರದ ಘಟ ಒಡೆದುಕೊಳ್ಳುವ ಘಟನೆಯಲ್ಲೂ ಸಾಕ್ಷೀಭಾವವು ಘಟ ಒಡೆಯುವ ಮೃತ್ಯುವೆಂಬ ಪ್ರಕ್ರಿಯೆಯನ್ನೂ ಅನುಭವಿಸಬಹುದು. ಈ ಎಚ್ಚರವೇ ಅಂತರಾಕಾಶದಲ್ಲಿ ವಿರಾಟಾಕಾಶದಲ್ಲಿ ಲೀನವಾಗುತ್ತದೆ. ಎಚ್ಚರದ ಕೇವಲ ಚೇತನವಾಗಿಯೋ ಆತ್ಮವಾಗಿಯೋ ಉಳಿಯುತ್ತದೆ. ಇಲ್ಲಿಂದ ಮತ್ತೊಂದು ಅದ್ಭುತ ಅಂತರ್ಯಾತ್ರೆ ಮುಂದುವರಿಯುವುದು. ಇಂತಹವರಿಗೆಂತು ಮೃತ್ಯು ಶತ್ರುವಾಗಲು ಸಾಧ್ಯ?
ಈ ಎಚ್ಚರವಂತ ಚೇತನರಿಗೆ ಮೃತ್ಯುವು ಮಿತ್ರನೇ. ಆತ್ಮ ಪರಮಾತ್ಮರ ಮಿಲನವು ಜೀವಂತ. ಜೀವನ ನಡೆಸುತ್ತಿರುವಾಗಲೂ ಎಚ್ಚರದ ಸ್ಥಿತಿಯಲ್ಲಿ ಸುಪ್ತವಾಗಿ ಗುಪ್ತವಾಗಿ ನಡೆಯುತ್ತಿರುತ್ತದೆ. ಇಂತಹ ಮಿಲನದ ಮಂದಿರದೊಳಗೆ ಮಹಾದ್ವಾರದಂತಿದೆ. ಧ್ಯಾನ ಪ್ರಕ್ರಿಯೆ ಇಂತಹ ಗಾಢತಮವಾದಂತೆ ಸಾಕ್ಷೀಭಾವವು ತೀವ್ರತರವಾಗುತ್ತಿರುತ್ತದೆ.