Thursday 11 June 2009

ದೇವರು

ದೇವರ ಅಸ್ತಿತ್ವವೆಂದರೆ ಉಪಸ್ಥಿತಿ ಅನುಪಸ್ಥಿತಿಯಂತೆ ಅನುಪಸ್ಥಿತಿಯೇ ಉಪಸ್ಥಿತಿಯಂತೆ.

ದೇವರು ಎಲ್ಲೂ ಕಾಣದಿರುವುದರಿಂದಲೇ ಎಲ್ಲೆಲ್ಲೂ ಇದ್ದಾನೆ. ಇರದ ಎಂದು ತಾಣವೂ ಇಲ್ಲ.

ನಿನ್ನನ್ನೇ ಎಲ್ಲೆಲ್ಲೂ ಕಾಣುವ ಭಕ್ತನಿಗೆ ನೀನೆಲ್ಲೂ ಕಾಣುವುದಿಲ್ಲ. ನಿನ್ನಂತೆ ಅವನು ರೂಪರಹಿತನಾದರೆ ಅವನೂ ಎಲ್ಲೂ ಕಾಣುವುದಿಲ್ಲ. ನಮ್ಮೊಳಗಿನ ಈ ಆಂತರಿಕ ಸಂವಾದ ಏನು?

ಹುಡುಕಿ ಹುಡುಕಿ ನಾನು ನನ್ನನ್ನೇ ಕಳೆದುಕೊಂಡು ಬಿಟ್ಟೆ. ಅವನು ಸಿಕ್ಕೇ ಬಿಟ್ಟ.
ಹುಡುಕು ಸಿಗೋಲ್ಲ. ಹುಡುಕಬೇಡ ಸಿಗುತ್ತೆ. ಯಾಕೆ ಗೊತ್ತಾ?
ಅದು ಅಲ್ಲೇ ಈಗಲೇ ಇದೆ. ಭಕ್ತನೆಲ್ಲಿದ್ದಾನೆ ಅಲ್ಲಿಲ್ಲ ದೇವರು. ಭಕ್ತನೆಲ್ಲಿ ಇಲ್ಲವೊ .. ಅಲ್ಲೇ ಇದ್ದಾನೆ ದೇವರು.

ಭಕ್ತನಿಗೆ ತಿಳಿದಿದೆ ನಾನಿದ್ದಲ್ಲಿ ದೇವನಿರುವುದಿಲ್ಲವೆಂದು ಅದಕ್ಕೆ ದೇವರನ್ನು ಇಟ್ಟಿದ್ದಾನೆ ಮೂರ್ತಿಯೊಳಗೆ.
ಪರಮಾತ್ಮನೇನೋ ದೂರದಲ್ಲಿದ್ದಾನಂತೆ, ಇಲ್ಲೇನಿದೆ? ಈಗೇನು?
ಪರಮಾತ್ಮ ಸ್ವರೂಪ ಒಬ್ಬ ಕವಿ ಹೊರಡಿಸುವ ಅಹಂಕಾರ ರಹಿತ ಕವಿತೆ.
ಅದು ಹೇಗೆ ರಾತ್ರಿಯಲ್ಲೂ ಕರುಣೆಯ ಬೆಳಕು ಬೆಳಗುತಿರುವುದೋ ನಿರಂತರ?
ಏನಿದು ಕೊತ್ತದ್ದರ ಹತ್ತು ಪಟ್ಟು ಬಿತ್ತಿಕೊಡುವ ಮೊಳೆಯುವ ಈ ಹನಿಬೀಜ?
ಎಂತೋ ಸಾಗರವಾಯಿತಲ್ಲ....!

ಚಿತ್ತದಾಳದ, ಕಮಲನಾಳದ, ಅತ್ಯಾಳದ ಭಾವ ಭಾವೈಕ್ಯತೆಯೇ ಪರಮಾತ್ಮ.

ಅಸ್ತಿತ್ವ ನನ್ನನ್ನು ಪ್ರೇಮಿಸುತ್ತದೆ ಹೂವಿನಂತೆ. ಹೂವಿನ ಮೇಲೆರಗುವ ಇಬ್ಬನಿಯಂತೆ. ಆಕಾಶವನೇ ಹೊಡೆಯುವಂತೆ. ನೀರು ಹರಿದಂತೆ, ನಿರ್ಮಲ.
ಅವಕಾಶವೆಂದರೆ ಅಸ್ತಿತ್ವ, ಅದು ಇಲ್ಲಿ ಈಗ.
ಎಲ್ಲವನ್ನು ಹೇಳಬಲ್ಲ ಆ ಒಂದು ಸಾಲು ಮರೆತೇ ಹೋಗಿದೆ, ಹೇಗೆ ಹೇಳಲಿ ಅದನು.
ಎಂತ ವಿಸ್ಮಯ, ಏನು ಅದ್ಭುತ?
ಅಬ್ಬಾ ರಹಸ್ಯವೇ, ಇದೊರಳಗೆ ವಿವೇಕ...
ರವಿ ಮೂಡುತಿದೆ.. ಹಕ್ಕಿ ಹಾಡುತಿದೆ.. ಹೂ ಅರಳುತಿವೆ..ತಾರೆಗಳು ಮಿನುಗುತಿವೆ.. ಚಂದ್ರ ಹಾಲು ಚೆಲ್ಲುವ.. ಜೀವನವೆಲ್ಲಾ ಆನಂದ ಪುಲಕಿತ..
ಅತೀತ ಪಶುತ್ವ.
ಭವಿಷ್ಯ ಪರಮಾತ್ಮ.
ನಡುವೆ ಮನುಷ್ಯತ್ವ.
ಅದ್ಭುತ ಪ್ರಕಾಶದ ಸಾಧ್ಯತೆ.. ಮನುಷ್ಯ.

Monday 8 June 2009

ಧರ್ಮ - ವಿವೇಕ

ಧರ್ಮ ಎಂಬುದೊಂದಿದ್ದರೆ ಮಾತ್ರ ಜೀವನದಲ್ಲಿರುವುದು ಸಾಧ್ಯ. ವ್ಯರ್ಥವಾದ ಊಹಾಪೋಹಕ್ಕೂ ಧರ್ಮಕ್ಕೂ ಅನ್ಯಥಾ ಸಂಬಂಧ ಇರಲಾರದು.

ಆತ್ಮವು ಒಂದು ಚೈತನ್ಯ; ಚೇತನ.
ವಿಚಾರಗಳಿಂದ ಸಿದ್ಧಾಂತಗಳಿಂದ ಮುಕ್ತವಾಗಿರುವ ಚೇತನವೇ ಧಾರ್ಮಿಕ ಚೇತನ.
ಧಾರ್ಮಿಕ ಚಿತ್ತ ಕಾಲ್ಪನಿಕ ಚಿತ್ತವಲ್ಲ.
ಭಯಕ್ಕೂ ಧರ್ಮಕ್ಕೂ ಸಂಬಂಧವಿಲ್ಲ; ಭಯಕ್ಕೂ ದೇವರಿಗೂ ಸಂಬಂಧ.
ಧಾರ್ಮಿಕರ ಕೈಯಲ್ಲಿ ಇಲ್ಲ ಧರ್ಮ.
ಧರ್ಮ ಎಂದರೆ ಅಭಯ. ಧರ್ಮ ಎಂದರೆ ಎಲ್ಲ ಭಯಗಳಿಂದ ವಿಮೋಚನೆ.
ಧರ್ಮವು ನಂಬಿಕೆಯಲ್ಲ.
ಧರ್ಮವು ಕುರುದುತನವಲ್ಲ. ಕಣ್ಣುಗಳ ಸೂಕ್ಷ್ಮತೆ.
ಶೋಷಣೆಯ ಪ್ರಕ್ರಿಯೆಗೆ ವಿವೇಕವಾಗಲೀ ಶ್ರದ್ಧೆಯಾಗಲೀ ತೊಂದರೆಯೇ ಸರಿ. ಧರ್ಮವು ಇದಕ್ಕೆ ಅಡ್ಡಿ, ಆತಂಕವೇ.
ಯಾವಾಗ ಧರ್ಮವು ವಿವೇಕ ಎಂಬ ಅಗ್ನಿಯಲ್ಲಿ ಮಿಳನವಾಗುತ್ತದೋ ಆಗ ಸ್ವಾತಂತ್ಯ್ರ ಮತ್ತು ಶಕ್ತಿಯ ಜನನವಾಗುತ್ತದೆ.
ಧರ್ಮವು ಆಗ ಬಳಶಾಲಿಯಾಗಿರುತ್ತದೆ. ಆಗ ವಿಚಾರದಿಂದ ಶಕ್ತಿ ಇದೆ.
ಧರ್ಮವು ಬೆಳಕು. ಪ್ರಜ್ಞೆಯ ಪ್ರಕಾಶ.
ಧರ್ಮವು ಮುಕ್ತಿ ಕೂಡಾ. ಯಾಕೆಂದರೆ ವಿವೇಕವೇ ಮುಕ್ತ.

Friday 5 June 2009

ಧರ್ಮ

ದುರ್ಬಲನು ಆತ್ಮ ಹಿಂಸಕನು;
ಸಬಲನು ಪರಹಿಂಸಕನು;
ಧಾರ್ಮಿಕನು ಅಹಿಂಸಕನು;

ಆತ್ಮ ಎಂಬುದೊಂದು ಸಿದ್ಧಾಂತವಲ್ಲ;
ಆತ್ಮ ಎಂಬುದೊಂದು ಅನುಭವ; ಅನುಭೂತಿ; ಒಂದು ಚೇತನ; ಚೈತನ್ಯ.

ಧರ್ಮವು ಸಂಪ್ರದಾಯಗಳಲ್ಲಿ ಇಲ್ಲ. ಸಂಪ್ರದಾಯಗಳು ಬರಿಯ ಸಂಘಟನೆಗಳು ಮಾತ್ರ.
ಧರ್ಮವು ಜೀವಂತ. ಚೈತನ್ಯದ ಚಲನಶೀಲತೆ ಧರ್ಮದಲ್ಲಿ ಇದೆ.
ಶಾಸ್ತ್ರಗಳ ಸಹಾಯ ಸಹಾರ ಇಲ್ಲದೆಯೂ ಧರ್ಮವು ಹಿಡಿದು ನಿಲ್ಲುತ್ತದೆ. ಹಿಡಿದು ಇಡುತ್ತದೆ.
ಆದುದರಿಂದಲೇ ಧರ್ಮವು ಜೀವಂತ. ಆಗ ಶಾಸ್ತ್ರವು ಮೃತ.

ಉಸಿರು ಉಸಿರಿನಲ್ಲಿ ಧರ್ಮ ಇದೆ. ಅದನ್ನು ಕಾಣುವ ದೃಷ್ಟಿ ನಮ್ಮಲ್ಲಿಲ್ಲ. ಧರ್ಮವು ರಕ್ತದ ಕಣಕಣದಲ್ಲಿ ಇದೆ. ಅದನ್ನು ಕಾಣುವ ಸಂಕಲ್ಪವು ಇಲ್ಲ. ಸಾಹಸವೂ ಇಲ್ಲ. ಧರ್ಮ ಸೂರ್ಯನಂತೆ ಸ್ಪಷ್ಟ. ಕಣ್ತೆರೆದು ನೋಡುವವರು ಯಾರು?
ಧರ್ಮವು ಜೀವನ. ಶರೀರದ ಸ್ಮಶಾನದಲ್ಲಿ ಅದನ್ನು ಕಾಣುವುದು ಎಂತು?
ನಿಷ್ಪಕ್ಷನಾಗದ ವಿನಃ ಧಾರ್ಮಿಕನಾಗುವುದು ಅಸಾಧ್ಯ. ಧರ್ಮವೆಂದರೆ ಅಪೇಕ್ಷೆ ಇಲ್ಲದಿರುವುದು, ನಿರ್ದೋಷಿಯಾಗಿರುವುದು.

Thursday 4 June 2009

ನಾವು - ನಮ್ಮ ಅರಿವು

ನಮಗಾವುದರ ಅರಿವು ಚೆನ್ನಾಗಿಲ್ಲವೋ ಅವುಗಳಿಂದ ನಾವು ಸದಾ ಬಂಧಿತರೇ;
ನಮಗಾವುದರ ಅರಿವು ಚೆನ್ನಾಗಿರುವುದೋ ಅವುಗಳಿಂದ ನಾವು ಸದಾ ಮುಕ್ತರೇ....

ಯಾವುದೇ ಕಾರಾಗೃಹದೊಳಗೆ ನಾವು ಬಂಧಿತರಾದರೂ ನಮಗೆ ಅಶಾಂತಿಯೇ. ವಿರಾಟದೊಂದಿಗೆ ಏಕೀಭಾವಕ್ಕೆ ಒಳಗಾದಾಗ ಅಲ್ಲಿ ಶಾಂತಿ ಬಿಟ್ಟು ಮತ್ತಿನ್ನೇನೂ ಇರಲಾರದು.

Wednesday 3 June 2009

ನಾನು - ಭ್ರಮೆ

ನಾನು ನನ್ನದು ವಿಸ್ತಾರವಾದಂತೆ ನನ್ನ ದುಃಖವೂ ವಿಸ್ತಾರವಾಗುವುದು.

ನಾನು ದೊಡ್ಡದಾದಷ್ಟೂ ನನ್ನ ಗಾಯವೂ ದೊಡ್ಡದು. ಅದಕ್ಕೆ ಬೀಳುವ ಚಿಕ್ಕ ಪೆಟ್ಟು ಕೂಡಾ ಬಹಳಷ್ಟು ದೊಡ್ಡದು.

ಸುಖವನ್ನು ವೃದ್ಧಿಸಿಕೊಂಡಷ್ಟೇ ನಾವೇ ದುಃಖವನ್ನು ವೃದ್ಧಿಸಿಕೊಂಡಿರುತ್ತೇವೆ.

ಎಲ್ಲಿಯಾದರೂ ನನ್ನದು ಎಂದು ಹೇಳಲು ಯಾವುದೇ ಉಪಾಯವೂ ಇಲ್ಲವಾದರೆ,
ವ್ಯರ್ಥವಾಗಿ ಸುಳ್ಳನ್ನೇ ನನ್ನದು ಎನ್ನುತ್ತಾ ಇರುತ್ತೆವೆಯಲ್ಲಾ, ಯಾಕೆ?

ನನ್ನೊಳಗಿರುವ ಉಸಿರು ನನ್ನದೇನು? ಆಗಷ್ಟೆ ಅದು ಪಕ್ಕದವರ ಉಸಿರಾಗಿತ್ತು. ಇನ್ನೊಂದು ಘಳಿಗೆಯಲ್ಲಿ ಇನ್ನಾರದೋ ಉಸಿರಾಗಬಹುದು.

ಬದುಕು ಯಾರ ದಾವೆಯನ್ನು ತಾನೆ ಸ್ವೀಕರಿಸುತ್ತದೆ? ಹರಿದು ಸಾಗಿ ಬಿಡುವುದೇ ಅದರ ಧರ್ಮ.
ಎಷ್ಟೊಂದು ಆಳವಪ್ಪ ನಮ್ಮ ಭ್ರಮೆ.