Tuesday 28 July 2009

ದೇವರು-೩

ಪರಮಾತ್ಮನಿಗೆ ಇನ್ನೆಲ್ಲಿದೆ ದೂರ
ಅದೇ ಯೋಗ

ಪರಮಾತ್ಮನೆಲ್ಲೋ ಅನತಿದೂರದಲ್ಲಿ
ಅದೇ ರೋಗ

ಪರಮಾತ್ಮನೆಲ್ಲೋ ಪ್ರಪಂಚವಿಲ್ಲ
ಅದೇ ಭೋಗ

ಸಕಾರಣವೆಲ್ಲವೂ ಸಂಸಾರದ ಅಂಗ
ಅಕಾರಣವೆಲ್ಲವೂ ಪರಮಾತ್ಮ ಸಂಗ

ಎಲ್ಲರೂ ಕೇಳುತ್ತಾರೆ ಜಾತಿ ಏಕಿವರಿಗೆ ನನ್ನ ಜಾತಿ
ತಿಳಿದಿರುವುದೇನು ಇವರಿಗೆ ಪರಮಾತ್ಮನ ಜಾತಿ
ಅವನದೇ ನನ್ನದೂ

ತಿಳಿದೂ ತಿಳಿದೂ ತಿಳಿಯದಾದಂತಾಯಿತೋ
ಪರಿಚಯವಾಗಿಯೂ ಅಪರಿಚಿತದಂತಾಯಿತೋ
ಅರಿತೂ ಅರಿತೂ ಅರಿಯದಂತಾಗಿ ಉಳಿಯಿತೋ
ಅಪ್ಪಿ ಬಿಗಿದಪ್ಪಿಕೊಂಡರೂ ತಪ್ಪಿಸಿಕೊಂಡೇಹೋಯಿತೋ
ಅಟ್ಟಿಬೆನ್ನತ್ತಿಹೋದರೋ ರಹಸ್ಯವನ್ನೇ ಬಿಟ್ಟು ಹೋಯಿತೋ
ಅಜ್ಞಾತವೇನೋ ಪರಮಾತ್ಮನೇನೋ

ಅನೇಕತೆ ಕಂಡಲ್ಲೆಲ್ಲ ಸಂಸಾರ
ಏಕತೆ ಕಂಡಲ್ಲೆಲ್ಲ ಭಗವಂತ

ದಿನವೂ ಅವನದೇ ರಾತ್ರಿಯೂ ಪ್ರಕಾಶವೂ ಅವನದೇ
ಅಂಧಕಾರವೂ ಅವನ ಅಂಧಕಾರದಲ್ಲೂ ಶಾಂತಿ
ಅವನ ರಾತ್ರಿಯಲ್ಲೂ ಸೌಂದರ್ಯ ರಾತ್ರಿಯ ಅಂಧಕಾರದ ಭಯ
ಅವನಲ್ಲಿ ಪೂರ್ವಾಗ್ರಹ ಬೇಡ ಅವನೋ ಪ್ರೇಮಗಂಗೆಯೇನೋ

ಅದಾರು ಹಿಡಿದರು ಅದಾರು ತುಂಬಿಕೊಂಡರು
ಅದೋ ಒಂದು ವಿರಾಟ

ಸಿಗುವುದೇನೋ ರಜಾ ಎಂದಾದರೂ ಎಂತಾದರೂ
ಸಂತತ್ವಕ್ಕೆ ಸಾಧುತ್ವಕ್ಕೆ

ಎಂದು ಬಿಡುಗಡೆ ಯಾರಿಗಾದರೂ ಪ್ರೇಮದಿಂದ
ಇಲ್ಲೇ ಇಗಲೇ ಇಂದೇ ನಮಗೆ ಪರಮಾತ್ಮನನ್ನು ನೋಡಬೇಕೆಂಬಾಸೆಯೇನು
ನಾಳೆ ನೋಡಿದರಾಗುವುದಿಲ್ಲವೇನು

ಮರಳು ಯಾರದು ಸಾಗರ ಯಾರದು
ನಾವೆಲ್ಲಿದ್ದರೇನಂತೆ ಅಲ್ಲೇ ಇದೆ

ಏನೋ ಸುಗಂಧ ಆಹ್ಲಾದ
ಶ್ರದ್ಧಾಸುಮ ಅರಳುವಲ್ಲಿ

ಅದೋ ನೋಡಿ ಪೂರ್ವದಲ್ಲಿ ಬೆಳಗಿನ ಜಾವದ ಕೊನೆಯ ನಕ್ಷತ್ರ
ಅದೇ ಜಗತ್ತು

ಸಂಸಾರವನ್ನು ನೋಡುವ ಕಣ್ಣಲ್ಲಿ ಪರಮಾತ್ಮನನ್ನು ಎಂತು ನೋಡಲಿ
ಪರಮಾತ್ಮನಿಂದ ಹೊರಗೆ ಇರಲು ಕೊಡಿ ಸ್ವಲ್ಪ ಸಮಯ
ಸ್ವಲ್ಪ ಸ್ಥಾನ ಸ್ವಲ್ಪ ಸೌಲಭ್ಯ

ಸಾಗರದ ಮೀನು ಎಂತು ಕಳೆದುಕೊಂಡೀತು ಸಾಗರವನ್ನು
ಕಳೆದುಕೊಂಡುದನು ಕನಸಿನಲು
ಹಾಗೆಯೇ ನಾವು ಕಾಣುವೆವು ಪರಮಾತ್ಮನನು ಎಚ್ಚರದಲ್ಲಲ್ಲವೇಕೆ
ಯಾವ ಅಲೆಗಳೂ ನಮ್ಮನ್ನೆಸೆಯಲಾರವು ಪರಮಾತ್ಮ ಸಾಗರದಲ್ಲಿ
ಬೆಸ್ತನೂ ಇಲ್ಲ ತಟವೂ ಇಲ್ಲ

ಮೂರ್ಛೆ ಭ್ರಮೆ ಕಳೆದರೆ ಉಳಿಯುವುದೇನು
ಪರಮಾತ್ಮ

ಬೇರೆಬೇರೆಯಾಗಿ ಪರಮಾತ್ಮನನ್ನು ಕಾಣುವ ಕಣ್ಣುಗಳಿಗೆ
ಪರಮಾತ್ಮ ನಿಜಕ್ಕೂ ಕಂಡಿರುವನೇನು

ಅಜ್ಞಾತ ಪರಮಾತ್ಮನ ತಿಳಿಯಲು
-ವಿಚಾರವೇ ಮಾರ್ಗ

ನಿಸ್ತರಂಗ ದರ್ಪಣದ ಮೇಲಿನ ಪ್ರತಿಬಿಂಬ
ಪರಮಾತ್ಮ

ಧನ್ಯತಾಭಾವದ ಮೋಡಗಳಿಲ್ಲವಾದರೆ
ಮಳೆಯಾದರೂ ಎಂದು ಸುರಿದೀತು

ಅಸ್ತಿತ್ವಕ್ಕೇನು ನಿಮ್ಮ ಭಾಷೆಯಿಂದ ಆಗ ಬೇಕಾದ್ದಿದೆ

No comments:

Post a Comment